ಕರಾವಳಿ

ಉಡುಪಿ: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಅಂತಿಮ ತೀರ್ಪು !

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ (52) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದ್ದು, ಪತ್ನಿ, ಮಗ ಸಹಿತ ಮೂವರು ಆರೋಪಿಗಳು ದೋಷಿಗಳು ಎಂದು ಮಹತ್ವದ ತೀರ್ಪು ನೀಡಿದೆ.

ಇಂದು ಮಧ್ಯಾಹ್ನ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಿದ್ದಾರೆ.

ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿರುವ ಆರೋಪಿಗಳು. ಸಾಕ್ಷ್ಯನಾಶ ಆರೋಪಿ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ:

2016ರ ಜು.28ರಂದು ಮಧ್ಯಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಆತನ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಸೇರಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟು ಹಾಕಿದ್ದರು.

ಜು. 31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾಪತ್ತೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಈ ಕೊಲೆ ಬೆಳಕಿಗೆ ಬಂದಿತ್ತು. ಅದರಂತೆ ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಮತ್ತು ಆ. 8ರಂದು ನಿರಂಜನ್ ಭಟ್ ನನ್ನು ಪೊಲೀಸರು ಬಂಧಿಸಿದ್ದರು.

ಸದ್ಯ ಪ್ರಕರಣದ ಪ್ರಮುಖ ಆರೋಪಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ದೊರೆತಿದ್ದು, ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ. ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ವಿಚಾರಣೆ ಮಧ್ಯೆ ಅನಾರೋಗ್ಯದಿಂದ ಮೃತಪಟ್ಟರೆ, ರಾಘವೇಂದ್ರ ಜಾಮೀನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker