ಕರಾವಳಿ

ಶಾರ್ಟ್ ಸರ್ಕ್ಯೂಟ್ ಗೆ ಕಾರು ಚಾಲಕ ಹೊತ್ತಿ‌ ಉರಿದು ಸಜೀವ ದಹನ

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಅಲ್ಟೋ ಕಾರೊಂದು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಗ್ರಾಮದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿ ಕಾರು ಚಾಲಕ ಅರೆನೂರು ಗ್ರಾಮದ ವಾಸಿ ರಘು ಎಂದು ಗುರುತಿಸಲಾಗಿದ್ದು,ಆತ ತನ್ನ ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಾಗ, ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸಾಧ್ಯವಾಗದೇ ಆತ ಕಾರಿನೊಳಗೆ ಅಸಹಾಯಕನಾಗಿ ಉಳಿದು ಕಾರಿನ ಜೊತೆಗೆ ಆತನು ಉರಿದು ಹೋಗಬೇಕಾಯಿತು. ಆತ ತನ್ನ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಸುತ್ತಮುತ್ತಲಿನವರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಾ ನಿಲ್ಲಬೇಕಾಯಿತು. ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲಕಾಲ ರಸ್ತೆ ಸಂಪೂರ್ಣ ಬಂದ್ ಆಗಿತ್ತು.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು,ಕಾರಿನಲಿದ್ದ ಮೃತದೇಹವನ್ನು ಹೊರತೆಗೆದು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು. ಮೃತ ವ್ಯಕ್ತಿ ರಘು ಕಾಫಿ ಟಿಂಬರ್ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಆಲ್ದೂರು ಪಿಎಸ್ಐ ಶಿವರುದ್ರಮ್ಮ ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker